ಕೋನಯ್ಯ
ಸು.1750. ಕೃಷ್ಣಾರ್ಜುನರ ಸಂಗರವೆಂಬ ಷಟ್ಪದೀ ಗ್ರಂಥದ ಕರ್ತೃ. ಈತ ಬ್ರಾಹ್ಮಣ. ಕಾಶ್ಯಪ ಗೋತ್ರದವ. ಹೋತೂರ ಬೆಟ್ಟರಸನ ಮಗ. ಸರಸಭಾರತಿ ಕೋನಯಾಖ್ಯನು-ಎಂದು ಹೇಳಿಕೊಂಡಿರುವುದರಿಂದ ಇವನಿಗೆ ಸರಸ ಭಾರತಿ ಎಂಬ ಬಿರುದಿದ್ದಂತೆ ತೋರುತ್ತದೆ. ಪೂರ್ವಕವಿಗಳಲ್ಲಿ ವ್ಯಾಸ, ವಾಲ್ಮೀಕಿ, ಶುಕ, ಕಾಳಿದಾಸಾದಿಗಳನ್ನು ಸ್ಮರಿಸಿದ್ದಾನೆ.
ಜೈಮಿನಿಭಾರತವನ್ನು ಬರೆದ ಲಕ್ಷ್ಮೀಶನನ್ನು (ಸು.1700) ಸ್ತುತಿಸುವುದರಿಂದ ಕವಿ ಅವನ ಕಾಲಕ್ಕಿಂತ ಈಚೆಯವನೆಂಬುದು ಸುಸ್ಪಷ್ಟ. ಇವನ ಗ್ರಂಥ ಕೃಷ್ಣಾರ್ಜುನರ ನಡುವೆ ನಡೆದ ಯುದ್ಧವನ್ನು ವರ್ಣಿಸುತ್ತದೆ. ಇಡೀ ಗ್ರಂಥ ಭಾಮಿನಿಷಟ್ಪದಿಯಲ್ಲಿದೆ. ಸಂಧಿ 27, ಪದ್ಯ 1721. ಇದಕ್ಕೆ ಗಯಚರಿತ್ರೆ ಎಂಬ ಹೆಸರೂ ಉಂಟು. ಗಯನೆಂಬ ಗಂಧರ್ವಶಿರೋಮಣಿ ಕೃಷ್ಣರಾಯಂಗೆ ದ್ರೋಹವನೆಸಗಿ ಫಲುಗುಣನಮ¾ುÉವೊಗಲು ಹರಿ ಕೊಡಹೇ¿ಲವನನು ಕೊಡೆನೆನೆ ಕಾದಿದರು ಹರಿನರರು ದ್ವೈತಕಾನನದಿ; ಪರಮೇಶನೀರ್ವರ ತಿಳುಹಿ ಸಾಮದಲೊಂದು ಮಾಡಿದನು-ಎಂಬುದೇ ಇದರ ಕಥಾಗರ್ಭ.

ಈ ಕಥೆ ಮಹಾಭಾರತದ ವನಪರ್ವದಲ್ಲಿದೆ ಎಂದೂ ಕೃತಿನಾಯಕ ತಿರುಪತಿವೆಂಕಟರಮಣನೆಂದೂ ಕೃತಿಯನ್ನು ಆತನಿಗೆ ಅರ್ಪಿಸಿರುವೆನೆಂದೂ ಕವಿ ಹೇಳುತ್ತಾನೆ. ಬಂಧ ಸರಳವೂ ಸುಲಭವೂ ಸರಸವೂ ಆಗಿರುವುದರಿಂದ ಈ ಕಾವ್ಯ ಜನಪ್ರಿಯವೆನಿಸಿದೆ. 

ಕರ್ಣಾಟಕ ಕಾವ್ಯ ಕಲಾನಿಧಿ ಸರಣಿಯಲ್ಲಿ ಈ ಗ್ರಂಥ ಅಚ್ಚಾಗಿದೆ.		 		(ಎಂ.ಎಸ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ